ಕಡ್ಡಲೂರು : ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಕೇಂದ್ರ ಮತ್ತು ಪ್ರಮುಖ ಪಟ್ಟಣ, ಸಣ್ಣ ಬಂದರು. ಜನಸಂಖ್ಯೆ : 2,605,914 (2011). ಪಾಂಡಿಚೇರಿಯಿಂದ 24 ಕಿಮೀ ದೂರದಲ್ಲಿದೆ. ಉತ್ತರ ಅಕ್ಷಾಂಶ 110.43’ ಮತ್ತು ಪುರ್ವರೇಖಾಂಶ 79ಂ.46’ಗಳಲ್ಲಿ ನೆಲಸಿದೆ. ಇದರ ಬಳಿ ಎರಡು ನದಿಗಳು ಕೂಡುವುದರಿಂದ ಈ ಪಟ್ಟಣಕ್ಕೆ ಕೂಡಲೂರು ಅಥವಾ ಕಡ್ಡಲೂರು ಎಂಬ ಹೆಸರು ಬಂದಿದೆ. ಈ ಪಟ್ಟಣವನ್ನು ಹೊಸ ಮತ್ತು ಹಳೆಯ ನಗರಗಳೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಸರ್ಕಾರಿ ಕಚೇರಿಗಳೂ ಅಧಿಕಾರಿಗಳ ಮನೆಗಳೂ ಸೇಂಟ್ ಡೇವಿಡ್ನ ಹಳೆಯ ಕೋಟೆ ಮತ್ತು ಪ್ರಾಚೀನ ಶಿವದೇವಾಲಯಗಳೂ ಹೊಸ ನಗರದಲ್ಲಿವೆ. ಪೇಟೆ ಮತ್ತು ಬಂದರುಗಳು ಹಳೆಯ ನಗರದಲ್ಲಿವೆ. ನೆಲಗಡಲೆ ಇಲ್ಲಿಂದ ರಫ್ತಾಗುವ ಮುಖ್ಯ ವಸ್ತು. ಬಣ್ಣದ ಬಟ್ಟೆಗಳ ನೇಯ್ಗೆ, ಕಡಲೆಕಾಯಿ ಎಣ್ಣೆಯ ಉತ್ಪಾದನೆ, ಹತ್ತಿ, ರೇಷ್ಮೆಬಟ್ಟೆಯ ತಯಾರಿಕೆ ಇವು ಮುಖ್ಯ ಕೈಗಾರಿಕೆಗಳು. ಮಲಯದೊಂದಿಗೆ ವ್ಯಾಪಾರಸಂಪರ್ಕ ಹೊಂದಿದೆ. ಇಲ್ಲಿಯ ಫ್ರೆಂಚ್ ರೋಮನ್ ಕೆಥೊಲಿಕ್ ಸಂಸ್ಥೆಯೊಂದು ದೊಡ್ಡ ಶಾಲೆಯೊಂದನ್ನು ನಡೆಸುತ್ತಿದೆ. ಬ್ರಿಟಿಷ್ ಈಸ್ಟ್‌ ಇಂಡಿಯ ಕಂಪನಿಯ ಆಗಮನದೊಂದಿಗೆ (1683) ಈ ಪಟ್ಟಣದ ಪ್ರಾಮುಖ್ಯ ಹೆಚ್ಚಿತೆನ್ನಬಹುದು. ಕಾರ್ಖಾನೆಗಳು ಕೋಠಿಗಳೂ ಬೆಳೆದವು. ಬ್ರಿಟಿಷರು ತಮ್ಮ ನೆಲೆಯನ್ನು ಭದ್ರಮಾಡಿಕೊಳ್ಳುವ ಉದ್ದೇಶದಿಂದ ಇಲ್ಲೊಂದು ಕೋಟೆ ಕಟ್ಟಿದರು. 1720ರಲ್ಲಿ ಇದು ವಿಸ್ತಾರಗೊಂಡಿತು. ರಾಬರ್ಟ್‌ ಕ್ಲೈವ್ (ನೋಡಿ-ಕ್ಲೈವ್,-ರಾಬರ್ಟ್) ಕಡ್ಡಲೂರಿನ ಗವರ್ನರ ನಾದದ್ದು 1756ರಲ್ಲಿ. ಸಾಮ್ರಾಜ್ಯದಾಹಿ ಇಂಗ್ಲಿಷ್ ಮತ್ತು ಫ್ರೆಂಚ್ ಕಂಪನಿಗಳ ಬಡಿದಾಟದಲ್ಲಿ ಕಡ್ಡಲೂರು ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. 1758ರಲ್ಲಿ ಫ್ರೆಂಚರು ಈ ಪಟ್ಟಣವನ್ನು ವಶಪಡಿಸಿಕೊಂಡರು. 
1760ರಲ್ಲಿ ಇದು ಅವರ ಕೈಬಿಟ್ಟಿತು; 1782ರಲ್ಲಿ ಫ್ರೆಂಚರು ಮತ್ತೆ ಆಕ್ರಮಿಸಿಕೊಂಡರು; 1785ರಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ಶಾಂತಿ ಒಪ್ಪಂದವಾದಾಗ ಮತ್ತೆ ಇಂಗ್ಲಿಷರ ಕೈಗೆ ಬಂತು. ಗವರ್ನರನ ನಿವಾಸವಾಗಿದ್ದ ಭವನವೀಗ ಕಲೆಕ್ಟರನ ಅಧಿಕೃತ 

ನಿವಾಸವಾಗಿದೆ.                             	(ಎನ್.ಎ.)